ಠೇವಣಾತಿಗಳು ಮತ್ತು ಇತರ ಖಾತೆಗಳ ವಿವರಗಳು :

ಪೀಠಿಕೆ : ಬ್ಯಾಂಕಿನಲ್ಲಿ ಯಾವುದೇ ಖಾತೆಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕಿನ ಸೂಚನೆಯಂತೆ ಕೆ.ವೈ.ಸಿ. ನಿಯಮ ಪಾಲಿಸುವುದು ಕಡ್ಡಾಯವಾಗಿರುತ್ತದೆ. ಅದರ ಪ್ರಕಾರ ಸದಸ್ಯರ/ ಗ್ರಾಹಕರ ಫೋಟೋ ಸಹಿತ ಗುರುತಿನ ಚೀಟಿ, ವಿಳಾಸ ದೃಢೀಕರಣ, ಗ್ಯಾಸ್ ಬಳಕೆದಾರರ ಪ್ರತಿ ಇತ್ಯಾದಿಗಳನ್ನು ನೀಡಬೇಕಾಗಿರುತ್ತದೆ. ಬ್ಯಾಂಕಿನ ಖಾತೆಗಳನ್ನು ತೆರೆದ ಮೇಲೆ ನಿರಂತರವಾಗಿ ವ್ಯವಹಾರ ನಡೆಸುತ್ತಿರಬೇಕು. ವ್ಯವಹಾರ ವಹಿವಾಟು ನಡೆಸದೇ 10 ವರ್ಷಕ್ಕೆ ಮೇಲ್ಪಟ್ಟು ಸ್ಥಗಿತಗೊಂಡ ಖಾತೆಗಳನ್ನು ಮತ್ತು ಅವಧಿ ಮುಗಿದ ಠೇವಣಿಗಳನ್ನು ವಾಪಸ್ಸು ಪಡೆಯದೇ ಅಥವಾ ನವೀಕರಿಸದೇ 10 ವರ್ಷ ಮುಂದುವರೆದಿದ್ದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದನ್ವಯ ಡಿ.ಇ.ಎ.ಎಫ್. (DEAF) ಖಾತೆಗೆ ವರ್ಗಾವಣೆ ಮಾಡಲಾಗುವುದು.


ಉಳಿತಾಯ ಖಾತೆ :

ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಒಂದು ವರ್ಷಕ್ಕೂ ಮೇಲ್ಪಟ್ಟು ಉಳಿತಾಯ ಖಾತೆ/ ಯಾವುದೇ ಖಾತೆ ಹೊಂದಿರುವ ಖಾತೆದಾರರು ಪರಿಚಯಿಸಲ್ಪಟ್ಟಲ್ಲಿ ಆ ವ್ಯಕ್ತಿಯು ಉಳಿತಾಯ ಖಾತೆಯನ್ನು ತೆರೆಯಬಹುದಾಗಿದೆ. ಖಾತೆ ತೆರೆಯಲು ಫೋಟೋ ಸಹಿತ ಗುರುತಿನ ಚೀಟಿ, ವಿಳಾಸದ ದೃಢೀಕರಣ ಪ್ರತಿ, ಪಾನ್ ಕಾರ್ಡ್ , ಆಧಾರ್ ಕಾರ್ಡ್ ನ ಪ್ರತಿ ಇತ್ಯಾದಿಗಳನ್ನು ನೀಡಬೇಕಾಗಿರುತ್ತದೆ. ಪಾಸ್ ಪುಸ್ತಕ ಹಾಗೂ ಚೆಕ್ಕು ಪುಸ್ತಕವನ್ನು ಎಲ್ಲಾ ಖಾತೆದಾರರಿಗೂ ವಿತರಿಸಲಾಗುವುದು. ಈ ಖಾತೆಗಳಲ್ಲಿ ಚೆಕ್ಕು ಪುಸ್ತಕ ರಹಿತ ರೂ. 250/- ಹಾಗೂ ಚೆಕ್ಕು ಪುಸ್ತಕ ಸಹಿತ ರೂ.500/-ಗಳ ಶಿಲ್ಕನ್ನು ನಿಗದಿಗೊಳಿಸಲಾಗಿದೆ. ತಮಗೆ ವಿತರಿಸುವ ಪ್ರತಿ ಚೆಕ್ಕುಗಳ ಹಾಳೆಗೂ ರೂ.1/-ರಂತೆ ಖರ್ಚು ಹಾಕಲಾಗುವುದು. ಪ್ರತಿ ದಿನದ ಅಂತ್ಯಕ್ಕೆ ಇರುವ ಶಿಲ್ಕಿನ ಆಧಾರದ ಮೇಲೆ ಶೇ.3.5 ರಂತೆ ಬಡ್ಡಿಯನ್ನು ನೀಡಲಾಗುವುದು. ಖಾತಾ ವ್ಯವಹಾರವನ್ನು ಒಂದು ವರ್ಷಕ್ಕೆ ಮೇಲ್ಪಟ್ಟು ವ್ಯವಹರಿಸದೇ ಇದ್ದಲ್ಲಿ ಅಂಥ ಖಾತೆಗಳನ್ನು ಸ್ಥಗಿತಗೊಳಿಸಲಾಗುವುದು.


ಚಾಲ್ತಿ ಖಾತೆ :

ಯಾವುದೇ ವ್ಯಕ್ತಿಯು ವ್ಯಕ್ತಿಗತ ಅಥವಾ ತಾನು ನಡೆಸುತ್ತಿರುವ ವ್ಯವಹಾರ ಘಟಕದ ಹೆಸರಿನಲ್ಲಿ ಅಥವಾ ಸಂಘ ಸಂಸ್ಥೆಗಳ ಹೆಸರಿನಲ್ಲಿ ಈ ಖಾತೆಯನ್ನು ತೆರೆಯಬಹುದಾಗಿದೆ. ಖಾತೆ ತೆರೆಯಲು ಪಾನ್ ಕಾರ್ಡ್ , ಆಧಾರ್ ಕಾರ್ಡ್ ನ ಪ್ರತಿ, ಸಂಸ್ಥೆಯ ನೋಂದಣಿ ಪ್ರತಿ, ಕರಾರು ಪತ್ರದ ಪ್ರತಿ, ಲೈಸೆನ್ಸ್, ಜಿಎಸ್ ಟಿ ಸರ್ಟಿಫಿಕೇಟ್, ಫೋಟೋ, ವಿಳಾಸ ದೃಢೀಕರಣ ಇತ್ಯಾದಿ ದಾಖಲೆಗಳನ್ನು ನೀಡಬೇಕಾಗಿದೆ. ಖಾತೆಯಲ್ಲಿ ರೂ.1000/- ಗಳ ಕನಿಷ್ಠ ಶಿಲ್ಕನ್ನು ವಿಧಿಸಲಾಗಿದೆ. ಈ ಖಾತೆಗೂ ಪಾಸ್ ಪುಸ್ತಕ ಮತ್ತು ಚೆಕ್ ಪುಸ್ತಕವನ್ನು ನೀಡಲಾಗುವುದು. ಖಾತೆದಾರರಿಗೆ ವಿತರಿಸುವ ಚೆಕ್ ಪುಸ್ತಕದ ಪ್ರತಿ ಹಾಳೆಗೂ ರೂ.1.00 ಗಳ ಖರ್ಚು ಹಾಕಲಾಗುವುದು. ಖಾತಾ ವ್ಯವಹಾರಕ್ಕನುಗುಣವಾಗಿ ಆಡಳಿತ ಮಂಡಳಿಯು ಕಾಲಕಾಲಕ್ಕೆ ನಿಗದಿಸಲ್ಪಡುವ ಸಾದಿಲ್ವಾರು ಖರ್ಚು (Incidental Charges)ಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ವಿಧಿಸಲಾಗುವುದು. ಈ ಖಾತೆಗೆ ಯಾವ ಬಡ್ಡಿಯನ್ನು ನೀಡಲಾಗುವುದಿಲ್ಲ. ಖಾತೆಯನ್ನು ಒಂದು ವರ್ಷಕ್ಕೆ ಮೇಲ್ಪಟ್ಟು ವ್ಯವಹಾರ ನಡೆಸದಿದ್ದಲ್ಲಿ ಅಂಥ ಖಾತೆಯನ್ನು ಸ್ಥಗಿತಗೊಳಿಸಲಾಗುವುದು.


ನಿಶ್ಚಿತ ಅವಧಿ ಠೇವಣಿ :

ನಿಶ್ಚಿತ ಠೇವಣಿಯನ್ನು ಕನಿಷ್ಠ 30 (ಮೂವತ್ತು ) ದಿವಸಗಳಿಗೆ ಹೂಡಿಕೆ ಮಾಡಬಹುದಾಗಿದೆ. ಕನಿಷ್ಠ ಮೊಬಲಗು ರೂ.500/- ಆಗಿರುತ್ತದೆ. ಈ ಖಾತೆಗೆ ಭಾರತೀಯ ರಿಸರ್ವ್ ಬ್ಯಾಂಕಿನ ಆದೇಶದಂತೆ ಕಾಲಕಾಲಕ್ಕೆ ಆಡಳಿತ ಮಂಡಳಿಯು ನಿರ್ಧರಿಸಲ್ಪಡುವ ಬಡ್ಡಿದರವನ್ನು ನೀಡಲಾಗುತ್ತದೆ. ಹಿರಿಯ ನಾಗರಿಕರ ಒಂದು ವರ್ಷಕ್ಕೂ ಮೇಲ್ಪಟ್ಟ ಠೇವಣಿಗಳಿಗೆ ಶೇ.0.50% ರಷ್ಟು ಹೆಚ್ಚಿನ ಬಡ್ಡಿ ನೀಡಲಾಗುವುದು. ಠೇವಣಿದಾರರು ಒಂದು ವರ್ಷದಲ್ಲಿ ರೂ. 40,000/- ( ರೂ. 50,000/- ಹಿರಿಯ ನಾಗರಿಕರಿಗೆ ) ಕ್ಕೂ ಹೆಚ್ಚಿನ ಬಡ್ಡಿಯನ್ನು ಪಡೆದಲ್ಲಿ ಟಿ.ಡಿ.ಎಸ್. (TDS) ಅನ್ವಯವಾಗುತ್ತದೆ. ಠೇವಣಿಗಳನ್ನು ವಾಯಿದೆಗೆ ಮುಂಚಿತವಾಗಿ ಮುಕ್ತಾಯಗೊಳಿಸಿದಲ್ಲಿ ಠೇವಣಿ ಬಡ್ಡಿದರಕ್ಕಿಂತ ಶೇ.1ರಷ್ಟನ್ನು ಕಡಿತಗೊಳಿಸಿ, (ಮುಕ್ತಾಯಗೊಳಿಸಿದ ಅವಧಿಯ ಮೇಲೆ ಅವಲಂಭಿತ) ನೀಡಲಾಗುವುದು. ಠೇವಣಿಗೆ ಶೇ.85 % ರಷ್ಟು ಸಾಲ ಸೌಲಭ್ಯ ಒದಗಿಸಲಾಗುವುದು.


ಅಶೋಕ ಕುಬೇರ ಯೋಜನಾ ಠೇವಣಿ :

ಕನಿಷ್ಠ ಒಂದು ವರ್ಷಕ್ಕೆ ರೂ. 500/- ಕ್ಕೆ ಕಡಿಮೆ ಇಲ್ಲದಂತೆ ಈ ಠೇವಣಿಯನ್ನು ತೆರೆಯಲಾಗುವುದು. ಈ ಖಾತೆಯಲ್ಲಿ ಮೂರೂ ತಿಂಗಳಿಗೊಮ್ಮೆ ಬಡ್ಡಿಯನ್ನು ಅಸಲಿನೊಂದಿಗೆ ಸೇರಿಸಲಾಗುವುದು. ಉಳಿದ ನಿಯಮಗಳು ನಿಶ್ಚಿತ ಅವಧಿ ಠೇವಣಿಯ ನಿಯಮದಂತೆ ಅನ್ವಯಿಸುತ್ತದೆ.


ಆವರ್ತಕ ಠೇವಣಿ :

ಕನಿಷ್ಠ ಅವಧಿ ಒಂದು ವರ್ಷ ಹಾಗೂ ಕನಿಷ್ಠ ಮೊಬಲಗು ರೂ.100/-ಹೂಡಿಕೆ ಮಾಡಬಹುದು. ಪ್ರತಿ ತಿಂಗಳು ಕ್ರಮರೀತ್ಯಾ ಪಾವತಿ ಮಾಡಬೇಕಾಗಿರುತ್ತದೆ, ಆದರೂ ಪಾವತಿ ಮಾಡಲು ಏಳು ದಿವಸಗಳ ರಿಯಾಯಿತಿ ಲಭ್ಯವಿದೆ. ತಪ್ಪಿದಲ್ಲಿ ಪ್ರತಿ ತಿಂಗಳು ಕಂತಿನ ಹಣದ ಮೇಲೆ ಶೇ.1.5 ರಷ್ಟು ಸುಸ್ತಿ ಬಡ್ಡಿಯನ್ನು ವಸೂಲಿ ಮಾಡಲಾಗುವುದು. ನಿಶ್ಚಿತ ಅವಧಿ ಠೇವಣಿಗೆ ನೀಡಲಾಗುವ ಬಡ್ಡಿದರವೇ ಈ ಖಾತೆಗೆ ಅನ್ವಯವಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ಲೆಕ್ಕಾಚಾರ ಮಾಡಲಾಗುವುದು. ಖಾತೆಯನ್ನು ಅರ್ಧಕ್ಕೆ ನಿಲ್ಲಿಸಿದಲ್ಲಿ ಕಟ್ಟಿರುವ ಮೊಬಲಗನ್ನು ವಾಯಿದೆ ಮುಗಿದ ನಂತರವೂ ಪಡೆಯಬಹುದು.