ಸುಮಾರು 45 ವರ್ಷಗಳ ಹಿಂದೆ ಹಳ್ಳಿಯ ವಾತಾವರಣವಿದ್ದ ಅಶೋಕನಗರವು ಬಸವನಗುಡಿ ಕ್ಷೇತ್ರದ ಒಂದು ಪುಟ್ಟ ಬಡಾವಣೆಯಾಗಿತ್ತು . ಬಹುತೇಕ ಆರ್ಥಿಕವಾಗಿ ಹಿಂದುಳಿದ ಜನರಿಂದ ಕೂಡಿತ್ತು. ಇಂತಹ ವಾತಾವರಣವಿದ್ದ ಪ್ರದೇಶದ ಜನರ ಆರ್ಥಿಕ ಅಭಿವೃದ್ಧಿಗಾಗಿ ಪಣ ತೊಟ್ಟ ಹಲವು ಗಣ್ಯ ವ್ಯಕ್ತಿಗಳಲ್ಲಿ ಏಕ ಮನಸ್ಸಿನ ವ್ಯಕ್ತಿಗಳಾದ ಅಂದಿನ ಮೇಯರ್ ಆದ ಮಾನ್ಯ ಶ್ರೀ. ಟಿ.ಡಿ ನಾಗಣ್ಣನವರು, ಶ್ರೀ. ಪಿ.ವಿ ರಾಮಚಂದ್ರರವರು, ಶ್ರೀ. ವಾದಿರಾಜರವರು, ಶ್ರೀ. ಪಿ.ವಿ. ಗುಂಡಪ್ಪರವರು ಮತ್ತು ಹಲವು ಗಣ್ಯ ನಾಗರೀಕರು ಒಂದೆಡೆ ಸೇರಿ ಅಶೋಕನಗರ ಬಡಾವಣೆಯ ಜನರನ್ನು, ಚೀಟಿ ನಡೆಸುವವರು ಮತ್ತು ಲೇವಾದೇವಿದಾರರ ಹಿಡಿತದಿಂದ ಹೊರತರುವ ಸದುದ್ದೇಶದಿಂದ 1973 ರಲ್ಲಿ ಬಡಾವಣೆಯ ಜನರಿಂದ ಷೇರು ಮೊತ್ತವನ್ನು ಸಂಗ್ರಹಿಸಿದರು, ಸಂಗ್ರಹವಾದ ರೂ.ಎರಡು ಲಕ್ಷ ಷೇರು ಬಂಡವಾಳದಿಂದ ಅಶೋಕನಗರ ಸಹಕಾರ ಬ್ಯಾಂಕನ್ನು ಪ್ರಾರಂಭಿಸಿದರು. ಪ್ರಾರಂಭದಿಂದಲೇ ಬಡಾವಣೆಯ ಜನರಿಗೆ ಸಂಘದಿಂದ ನೀಡುವ ಸೌಲಭ್ಯದ ಬಗ್ಗೆ ತಿಳುವಳಿಕೆ ಮೂಡಿಸುತ್ತಾ ಚೀಟಿ ಮತ್ತು ಲೇವಾದೇವಿದಾರರ ಕಪಿಮುಷ್ಟಿಯಿಂದ ಹೊರತರುವ ಪ್ರಯತ್ನ ಮಾಡಲಾಯಿತು .
ನಂತರ ಸದಸ್ಯರಿಗೆ ಮತ್ತು ಗ್ರಾಹಕರಿಗೆ , ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಹೆಚ್ಚಿನ ಸೇವೆ ಸಲ್ಲಿಸುವ ಉದ್ದೇಶದಿಂದ ಬ್ಯಾಂಕಿಂಗ್ ಸೇವೆ ಆರಂಭಿಸಲು ಯೋಚಿಸಿ, ಅರ.ಬಿ.ಐ.ಯಿಂದ ಲೈಸೆನ್ಸ್ ಪಡೆದು ಬ್ಯಾಂಕಿಂಗ್ ವಹಿವಾಟನ್ನು ನಡೆಸಲು ಪ್ರಾರಂಭಿಸಿತು. ಬ್ಯಾಂಕಿನ ಗ್ರಾಹಕರು ಮತ್ತು ಸದಸ್ಯರುಗಳಿಗೆ, ಬ್ಯಾಂಕಿಂಗ್ ನಿಯಮ ಮತ್ತು ಕಾಯ್ದೆಯ ಚೌಕಟ್ಟಿನೊಳಗೆ, ಆರ್.ಬಿ.ಐ.ನ ನಿರ್ದೇಶನ ಮತ್ತು ಸುತ್ತೋಲೆಗನುಗುಣವಾಗಿ ಮತ್ತು ಉತ್ತಮ ಸೇವೆ ನೀಡುವ ಸಲುವಾಗಿ ನಿಯಾಮಾವಳಿಗಳನ್ನು ರೂಪಿಸಿಕೊಳ್ಳಲಾಯಿತು. ಆಡಳಿತ ಮಂಡಳಿ ಹಾಗೂ ಪರಿಣಿತ ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆಯ ಪರಿಣಾಮವಾಗಿ ಬ್ಯಾಂಕು ಪ್ರತಿ ವರ್ಷವೂ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಲೇ ಬಂದಿದೆ. ಪ್ರತಿ ವರ್ಷವೂ ಲಾಭ ಗಳಿಸುತ್ತಾ ಹಾಗು ಸತತವಾಗಿ ಮಾನ್ಯ ಸದಸ್ಯರಿಗೆ ಲಾಭಾಂಶ ವಿತರಿಸುತ್ತಾ ಬಂದಿದೆ.
ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಒದಗಿಸುವ ಎಲ್ಲಾ ಬ್ಯಾಂಕಿಂಗ್ ಸೇವಾ ಸೌಲಭ್ಯಗಳನ್ನು ನಮ್ಮ ಬ್ಯಾಂಕು ಕೂಡ ತನ್ನ ಗ್ರಾಹಕರಿಗೆ ತ್ವರಿತಗತಿಯಲ್ಲಿ ಅತ್ಯುತ್ತಮ ಹಾಗೂ ಸೇವಾ ನಿಷ್ಠೆಯೊಂದಿಗೆ ಒದಗಿಸುತ್ತಿದೆ.
ನಮ್ಮ ಬ್ಯಾಂಕಿನಲ್ಲಿ ಠೇವಣಾತಿಗಳ ಮೇಲೆ ನೀಡುತ್ತಿರುವ ಹೆಚ್ಚಿನ ಬಡ್ಡಿ ದರ, ಮಾರುಕಟ್ಟೆ ರೀತ್ಯಾ ಒದಗಿಸುತ್ತಿರುವ ಸಾಲ ಸೌಲಭ್ಯಗಳು, ದೂರದೂರಿನ ಯಾವುದೇ ಬ್ಯಾಮಕಿನ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಬಳಸುತ್ತಿರುವ RTGS/NEFT, POS, D.D, PAY ORDER ಮತ್ತು ಗ್ರಾಹಕರ ಸೇವೆಗಾಗಿ ನೀಡುತ್ತಿರುವ ಭದ್ರತಾ ಲಾಕರ್ ಸೌಲಭ್ಯ ಮುಂತಾದ ಸೇವಾ ಸೌಲಭ್ಯಗಳ ಬಗ್ಗೆ ಇ – ಅಂತರ್ಜಾಲ ಪುಟಗಳಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ. ಮಾನ್ಯ ಗ್ರಾಹಕರು ನಮ್ಮ ಬ್ಯಾಂಕಿನಲ್ಲಿ ಒದಗಿಸುತ್ತಿರುವ ಈ ಎಲ್ಲಾ ಸೇವೆಗಳ ಸದುಪಯೋಗ ಪಡೆಯಬೇಕೆಂದು ಕೋರುತ್ತೇವೆ.